ತೇಲುಹಕ್ಕಿ-
ಕಾರಡ್ರೈಯಿಫಾರ್ಮಿಸ್ ಗಣದ ರಿಂಕಾಪಿಡಿ ಕುಟುಂಬಕ್ಕೆ ಸೇರಿದ ಹಲವಾರು ಬಗೆಯ ಹಕ್ಕಿಗಳ ಸಾಮಾನ್ಯ ಹೆಸರು (ಸ್ಕಿಮರ್). ಸಮಶೀತೋಷ್ಣ ಮತ್ತು ಉಷ್ಣವಲಯಗಳಲ್ಲಿ ಕಾಣಬರುವುವು. ಈ ಹಕ್ಕಿಗಳ ವೈe್ಞÁನಿಕ ಹೆಸರು ರಿಂಕಾಪ್ಸ್. ಟರ್ನ್ ಹಕ್ಕಿಗಳನ್ನು ಹೋಲುವ ಇವು ಅತಿ ಉದ್ದವಾದ ರೆಕ್ಕೆ ವಿಶಿಷ್ಟವಾದ ಚಾಕುವಿನಂಥ ಕೊಕ್ಕು, ಉದ್ದಸೀಳು, ಪಡೆದಿರುವ ಕಣ್ಣಿನ ಪಾಪೆ, (ಪ್ಯೂಪಿಲ್) ಮೊದಲಾದ ಲಕ್ಷಣಗಳಿಂದ ಕೂಡಿದ್ದು ಟರ್ನ್ ಹಕ್ಕಿಗಳಿಗಿಂತ ಭಿನ್ನವಾಗಿದೆ. ಉದ್ದಸೀಳಿನ ಕಣ್ಣಿನಪಾಪೆ ಈ ಹಕ್ಕಿಗಳ ವಿಶೇಷ ಲಕ್ಷಣ. ತೀಕ್ಷ್ಣವಾದ ಸೂರ್ಯನ ಪ್ರಭೇಯಿಂದ ಕಣ್ಣುಗಳನ್ನು ಇಂಥ ಪಾಪೆ ರಕ್ಷಿಸುತ್ತದೆ. ಈ ಹಕ್ಕಿಗಳಿಗೆಮೊನಚಾದ ರೆಕ್ಕೆಗಳು, ಮಿತವಾಗಿ ಕವಲೊಡೆದಿರುವ ಬಾಲ, ಗಿಡ್ಡ ಕಾಲುಗಳು ಮತ್ತು ಒಳನಿಟ್ಟಿನಿಂದಲೇ ರೂಪುಗೊಂಡ ಜಾಲಪಾದ ಉಂಟು. ತೇಲು ಹಕ್ಕಿಗಳಲ್ಲಿ ಮೂರು ಪ್ರಬೇದಗಳಿವೆ. ಇವುಗಳ ಗರಿಗಳ ಬಣ್ಣದಲ್ಲಿ ಅಲ್ಪ ವ್ಯತ್ಯಾಸವನ್ನು ಕಾಣಬಹುದು. ಗಂಡು ಮತ್ತು ಹೆಣ್ಣು ಹಕ್ಕಿಗಳಲ್ಲಿ ವ್ಯತ್ಯಾಸವಿಲ್ಲ. 1 ಭಾರತದ ತೇಲುಹಕಿ : ಭಾರತದ ದೊಡ್ಡನದಿಗಳು ಮತ್ತು ಸರೋವರಗಳಲ್ಲಿ ವಾಸಿಸುವ ಏಷ್ಯಖಂಡದ ಏಕಮಾತ್ರ ತೇಲುಹಕ್ಕಿ. ಇದರ ಕತ್ತು ಬಿಳಿಬಣ್ಣದ್ದು, ಕೊಕ್ಕಿನ ಬಣ್ಣ ಹಳದಿ 2 ಅಮೆರಿಕದ ಕಪ್ಪು ತೇಲುಹಕ್ಕಿ : ಇವುಗಳ ಕೊಕ್ಕು ಕಿತ್ತಳೆಬಣ್ಣದ್ದು. ಕೊಕ್ಕಿನ ತುದಿ ಮಾತ್ರ ಕಪ್ಪು. 3 ಆಫ್ರಿಕದ ತೇಲುಹಕ್ಕಿ : ಮಿಂಚುವ ಹಳದಿ ತುದಿಯ ಕಿತ್ತಲೆ ಬಣ್ಣದ ಕೊಕ್ಕನ್ನು ಹೊಂದಿರುವ ಚಿಕ್ಕಗಾತ್ರದ ತೇಲುಹಕ್ಕಿ ಅಫ್ರಿಕ ಖಂಡದ ಕರಾವಳಿ, ಸರೋವರ, ನದೀತೀರಗಳಲ್ಲಿ ವಾಸಮಾಡುತ್ತಾರೆ.

ಅಮೆರಿಕದ ಕಪ್ಪು ತೇಲು ಹಕ್ಕಿ ತೇಲುಹಕ್ಕಿಗಳಲ್ಲೆಲ್ಲ ದೊಡ್ಡದು. ಭಾರತದ ಮತ್ತು ಅಫ್ರಿಕ ಖಂಡದ ತೇಲುಹಕ್ಕಿಗಳು ಚಿಕ್ಕಗಾತ್ರದವು. ಇವುಗಳ ಬೆನ್ನುಭಾಗ ಕಪ್ಪು ಮಿಶ್ರಿತ ಕಂದು ಬಣ್ಣದ್ದು. ತೇಲುಹಕ್ಕಿಗಳ ಕೊಕ್ಕು ವಿಶಿಷ್ಟ ಬಗೆಯದು. ರಚನೆಗಳ ಅಂಚು ರೇಜರಿನ ಅಂಚಿನಂತೆ ತೆಳುವಾಗಿದೆ. ಕೆಳದವಡೆ ಮೇಲುದವಡೆಗಿಂತ ಮುಂದಕ್ಕೆ ಚಾಚಿದೆ.  ಕೆಳದವಡೆಯ ಪಾಶ್ರ್ವಗಳ ಅಂಚು ಚಪ್ಪಟೆಯಾಗಿದ್ದು ಚಾಕುವಿನಷ್ಟು ಹರಿತವಾಗಿದೆ. ಮೇಲುದವಡೆಯಲ್ಲಿ ಸಂದುಗೆರೆಯುಂಟು. ಬಾಯಿ ಮುಚ್ಚಿಕೊಳ್ಳುವಾಗ ಕೆಳದವಡೆಗೆ ಹೊಂದಿಕೊಳ್ಳಲು ಇದು ಸಹಾಯಕವಾಗಿದೆ.

ತೇಲುಹಕ್ಕಿಗಳು ತೆಟ್ಟೆ ನೀರಿನಲ್ಲಿ ವಾಸಿಸುವ ಮೀನು ಮತ್ತು ಸೀಗಡಿ ಮೀನುಗಳನ್ನು ವಿಚಿತ್ರ ರೀತಿಯಲ್ಲಿ ಹಿಡಿದು ತಿನ್ನುತ್ತವೆ. ನದಿಗಳ ಅಂಚಿನಲ್ಲೂ ಕೊಳ ಮತ್ತು ಸರೋವರಗಳಲ್ಲೂ ಸಮುದ್ರದಂಡೆಯಲ್ಲೂ ಇವು ಅಹಾರವನ್ನು ಬೇಟೆಯಾಡುತ್ತವೆ. ಉಬ್ಬರವಿಳಿತದ ಕಾಲದಲ್ಲಿ ನಸುಕಿನಲ್ಲಿ ಮತ್ತು ಸಂಜೆಯಲ್ಲಿ ಬಹಳ ಚುರುಕಾಗಿ ಮೀನುಗಳನ್ನು ಹಿಡಿದು ತಿನ್ನುತ್ತವೆ. ಉಬ್ಬರ ಹೆಚ್ಚಾಗಿರುವ ಕಾಲದಲ್ಲಿ ಸಮುದ್ರದಂಡೆಯ ಮರಳಿನ ಮೇಲೆ ಸುಮ್ಮನೆ ಕುಳಿತಿರುವುವು. ಬೇಟೆಯಾಡುವಾಗ ಬಾಯಿಯನ್ನು ತೆರೆದು ನೀರಿಗೆ ಹತ್ತಿರವಾಗಿ ಹಾರಾಡುತ್ತ, ಕೊಕ್ಕಿಗೆ ತಾಕಿದ ಮೀನುಗಳನ್ನು ಸೆರೆಹಿಡಿಯುತ್ತವೆ ಮೀನು ಹಿಡಿಯುವ ಕಾಲದಲ್ಲಿ ಮೇಲುದವಡೆ ನೀರಿನ ಮೇಲ್ಬಾಗದಲ್ಲೂ ಕೆಳದವಡೆ ನೀರಿನ ಒಳಗೂ ಇರುತ್ತದೆ. ನೀರಿನ ಹತ್ತಿರದಲ್ಲೇ ಹಾರುತ್ತ ಕೆಳದವಡೆಯಿಂದ ನೀರನ್ನು ಉಳುವ ರೀತಿಯಲ್ಲಿ ಛೇದಿಸಿಕೊಂಡು, ಬಾಯನ್ನು ಅಗಲವಾಗಿ ತೆರೆದು, ಕೆಳದವಡೆಗೆ ಸೋಕಿದ ಮೀನನ್ನು ಮೇಲುದವಡೆಯ ಸಹಾಯದಿಂದ ನುಂಗುತ್ತವೆ. ಇವುಗಳ ಈ ವಿಲಕ್ಷಣ ಆಹಾರ ಸೇವನೆಯ ರೀತಿಯಿಂದ ರಿಂಕಾಪ್ಸ್ ವರ್ಗದ ಹಕ್ಕಿಗಳನ್ನು ಜಲಸೀಳಿಕೆಗಳು, ಕತ್ತರಿ ಕೊಕ್ಕಿನ ಹಕ್ಕಿಗಳು ಎಂದು ಕರೆಯುವುದೂ ಉಂಟು.

ತೇಲುಹಕ್ಕಿಗಳ ಗುಂಪು ಸಮುದ್ರ ತೀರದ ಮರಳಿನಲ್ಲಿ ಅಥವಾ ನದಿಯ ಇಕ್ಕೆಲಗಳಲ್ಲಿ ಸಣ್ಣ ಗೂಡನ್ನು ರಚಿಸುವುವು. ಪ್ರಣಯಾಚರಣೆಯ ಕಾಲದಲ್ಲಿ ಗಂಡು ಹಕ್ಕಿ ಕೊಕ್ಕಿನಲ್ಲಿ ಹಿಡಿದಿಟ್ಟುಕೊಂಡಿರುವ ಒಂದು ಸಣ್ಣ ಕಡ್ಡಿಯನ್ನು ಹೆಣ್ಣುಹಕ್ಕಿಗೆ ಅರ್ಪಿಸುವುದುಂಟು. ಒಂದು ಸಲಕ್ಕೆ ಮೂರು ಅಥವಾ ನಾಲ್ಕು ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳ ಮೇಲೆ ಮಚ್ಚೆಗಳುಂಟು. ಗಂಡು ಮತ್ತು ಹೆಣ್ಣು ಹಕ್ಕಿಗಳೆರಡೂ ಕಾವು ಕೊಡುವ ಕೆಲಸವನ್ನು ಹಂಚಿಕೊಳ್ಳತ್ತವೆ. ಮರಿಹಕ್ಕಿಗಳು ಬೂದು ಬಣ್ಣಕ್ಕಿವೆ. ಇವು ನೆಲದ ಮೇಲೆ ಚಪ್ಪಟೆಯಾಗಿ ಮುದುರಿಕೊಳ್ಳುವುದರಿಂದ ಇವನ್ನು ಪತ್ತೆಹಚ್ಚುವುದು ಕಷ್ಟ. ಮರಿಹಕ್ಕಿಗಳ ಮೇಲು ಮತ್ತು ಕೆಳದವಡೆಗಳೆರಡೂ ಸಮಾನ ಉದ್ದನಾಗಿರುತ್ತವೆ. ಇದರಿಂದಾಗಿ ನೆಲದ ಮೇಲೆ ಬಿದ್ದ ಮೀನನ್ನು ಕೊಕ್ಕಿನ ಸಹಾಯದಿಂದ ಇವು ಎತ್ತಿಕೊಳ್ಳಬಲ್ಲವು.				
(ಎ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ